ಜೀವನಚರಿತ್ರೆ

ಚಿಕ್ಕಕೊಮಾರಿಗೌಡ(ಸಿ.ಕೆ.ಗೌಡ)ರ ಜೀವನ ಪರಿಚಯ

ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ವಿ.ಪಿ.ಹೋಬಳಿ, ಹಾರೋಕೊಪ್ಪ ಗ್ರಾಮದ ವಾಸಿ ದಿವಂಗತ ಶ್ರೀ ಸಿದ್ದೇಗೌಡ ಮತ್ತು ಸಿದ್ದಮ್ಮನವರ ಮಗನಾಗಿ 24-3-1940ರಲ್ಲಿ ಕಡು ಬಡತನದಲ್ಲಿ ಜನಿಸಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಹಾರೋಕೊಪ್ಪದಲ್ಲಿ ಮುಗಿಸಿ ನಂತರ ಮಾಧ್ಯಮಿಕ ಶಾಲೆಯನ್ನು ಹಾರೋಕೊಪ್ಪದಿಂದ 3 ಕಿಮೀ ದೂರವಿರುವ ಸೋಗಾಲ ಗ್ರಾಮದಲ್ಲಿ 8ನೇ ತರಗತಿಯವರೆಗೆ ಓದಿ ಮುಗಿಸಲಾಯಿತು. ನನ್ನ ತಂದೆ ನನ್ನ 7 1/2 ವರ್ಷಕ್ಕೆ ದೈವಾದೀನರಾದ ಪ್ರಯುಕ್ತ, ನನ್ನ ತಾಯಿ ಬಹಳ ಕಷ್ಟ ಪಟ್ಟು ಮಾಧ್ಯಮಿಕ ಶಾಲೆಯವರೆಗೂ ಓದಿಸಿದರು. ನಾನು ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯರಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾದ್ದುರಿಂದ ನನಗೆ ಸರ್ಕಾರದಿಂದ ಶಿಷ್ಯವೇತನ ಬರುತ್ತಿತ್ತು.

ನಾನು ಮಾಧ್ಯಮಿಕ ಶಾಲೆ ಮುಗಿಸಿದ ನಂತರ ಪ್ರೌಢಶಾಲೆಗೆ ಹೋಗಲು ಬಡತನದಿಂದ ತಾಯಿ ನಿಸ್ಸಾಯಕಳಾದಾಗ, ನಾನು ಓದಲೇಬೇಕೆಂಬ ಛಲದಿಂದ ಬೆಂಗಳೂರಿನಲ್ಲಿ ಚಿಲ್ಲರೆ ಅಂಗಡಿಯನ್ನಿಟ್ಟುಕೊಂಡು ಜೀವನ ಮಾಡುತ್ತಿದ್ದ ನನ್ನ ದೊಡ್ಡಮ್ಮ(ತಾಯಿಯ ಅಕ್ಕ)ನನ್ನು ಕೇಳಲಾಗಿ, ನೀನು ನಮ್ಮ ಮನೆಯ ಕೆಲಸ ಮಾಡಿದರೆ, ಊಟ ಕೊಡುತ್ತೇವೆ, ಹಣ ಕೇಳಬಾರದು ಎಂಬ ಷರತ್ತಿನೊಡನೆ ಬರಲು ಒಪ್ಪಿಗೆ ಕೊಟ್ಟರು. ಆದರೆ ಹಣದ ಅವಶ್ಯಕತೆಯೂ ಇದ್ದುದರಿಂದ, 1954ರ ಮಾರ್ಚಿನಲ್ಲಿ ಪರೀಕ್ಷೆ ಮುಗಿದ ಕೂಡಲೆ ಕಬ್ಬು ಹರದು ಬೆಲ್ಲ ಮಾಡುವ ಒಂದು ಆಲೆಮನೆಯಲ್ಲೆ ಕೆಲಸಕ್ಕೆ ಸೇರಿ ಮಾರ್ಚ್ ಮಧ್ಯದಿಂದ ಮೇ ಮಧ್ಯಭಾಗದವರೆಗೂ ದುಡಿದು ರೂ.80 ರೂಪಾಯಿ ಸಂಪಾದಿಸಿ, ಅದರೊಡನೆ ಬೆಂಗಳೂರಿಗೆ ಬಂದು, ಕೋಟೆ ಪ್ರೌಢಶಾಲೆಗೆ ಸೇರಿದೆ. ನನ್ನ ದೊಡ್ಡಮ್ಮನ ಮನೆಯಲ್ಲಿ ಹಸು, ಎಮ್ಮೆ, ಸಾಕಿದ್ದರಿಂದ, ನನಗೆ ಊಟ ಕೊಡಲು ಸ್ಕೂಲಿಗೆ ಹೋಗುವವರೆಗೂ ನಂತರ ಸ್ಕೂಲಿನಿಂದ ಬಂದ ನಂತರವೂ ಅವುಗಳ ಕೆಲಸ ಮಾಡಬೇಕಾಗಿತ್ತು. ಶಾಲೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಇದ್ದುದರಿಂದ, ಅವರ ಮನೆಯ ಕೆಲಸಕ್ಕೆ ತೊಂದರೆಯಾಗದಂತೆ ಕೆಲಸ ಮಾಡಿಕೊಂಡಿದ್ದೆ. ಅವರು ಹಸುವಿಗೆ ಹುಲ್ಲು ಬೇಕಾದ್ದರಿಂದ, ಚಾಮರಾಜಪೇಟೆಯಲ್ಲಿದ್ದ ಶ್ರೀಮತಿ ಲೇಡಿ ಪಾರ್ವತಮ್ಮ ಪುಟ್ಟಣ್ಣ ಚೆಟ್ಟಿ ಬಂಗಲೆಯಲ್ಲಿ, ಹುಲ್ಲು ಕಠಾವು ಮಾಡಿಕೊಳ್ಳಲು ಅಪ್ಪಣೆ ಪಡೆದಿದ್ದರು. ನಾನು ಸ್ಕೂಲಿನಿಂದ ಬಂದ ನಂತರ ಮತ್ತು ಭಾನುವಾರ, ಹುಲ್ಲು ಕುಯ್ದು ತರುತ್ತಿದ್ದೆ. ಹೀಗಿರುವಾಗ ನಾನು ಊರಿನಿಂದ ತಂದಿದ್ದ 80 ರೂಪಾಯಿಗಳು, ಸ್ಕೂಲ್ ಫೀಜ್, ಪುಸ್ತಕಗಳಿಗೆ ಖರ್ಚಾಗಿ ಮುಂದಿನ ಖರ್ಚಿಗೆ ಹಣಕ್ಕೆ ದಿಕ್ಕುತೋಚದಂತಾಯಿತು. ಆ ವೇಳೆ ನಾನು ಹುಲ್ಲು ಕುಯ್ದು ತರುತ್ತಿದ್ದ, ಬಂಗಲೆಯ ತೋಟಗಾರಿಕೆ ಕೆಲಸವನ್ನು ಶ್ರೀ ಕೆಂಪಯ್ಯ ಎಂಬಾತ ಮಾಡುತ್ತಿದ್ದು, ಆತ ಸೆಂಟ್ರಲ್ ಕಾಲೇಜಿನಲ್ಲಿಯೂ ಜವಾನನಾಗಿದ್ದು ಕೆಲವು ದಿವಸ, ತೋಟಗಾರಿಕಾ ಕೆಲಸಕ್ಕೆ ಗೈರು ಹಾಜರಾಗಿ, ಗಿಡಗಳು ಒಣಗಿಬಾಡಿ ಹೋಗುತ್ತಿದ್ದವು.

ನಾನು ಒಂದು ದಿನ ಈ ರೀತಿಯ ದೃಶ್ಯವನ್ನು ನೋಡಿ, ಆ ಬಂಗಲೆಯ ಯಜಮಾನಿ ಶ್ರೀಮತಿ ಲೇಡಿ ಪಾರ್ವತಮ್ಮನವರ ತಂಗಿ ಶ್ರೀಮತಿ ನಾಗಮ್ಮನವರನ್ನು ಕಾರಣ ಕೇಳಿದೆ. ಆಗ ಶ್ರೀಮತಿ ನಾಗಮ್ಮನವರು ಶ್ರೀ ಕೆಂಪಯ್ಯನವರಿಗೆ ತಿಂಗಳಿಗೆ ರೂಪಾಯಿ ಕೊಡುತ್ತಿದ್ದೇವೆ. ಆತ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಬೇರೆ ಯಾರನ್ನಾದರೂ ನೇಮಕ ಮಾಡಿಕೊಳ್ಳಬೇಕೆಂದು ತಿಳಿಸಿದರು. ಆಗ ನಾನು ನನ್ನ ಹಣದ ಅವಶ್ಯಕತೆಯಿಂದ, ನನ್ನ ವಿವರವನ್ನು ತಿಳಿಸಿ ನೀವು ಒಪ್ಪಿದರೆ ನಾನು ಮಾಡುತ್ತೇನೆಂದು ತಿಳಿಸಿದೆ. ಆಗ ಅವರು ವಿಚಾರವನ್ನು ತನ್ನ ಅಕ್ಕ ಶ್ರೀಮತಿ ಪಾರ್ವತಮ್ಮನವರಿಗೆ ತಿಳಿಸಿದಾಗ, ಅವರು ಬಂದು ನನ್ನನ್ನು ಖುದ್ದಾಗಿವಿವರ ಕೇಳಿದರು. ಅವರಿಗೆ ನನ್ನ ವಿಚಾರವನ್ನು ತಿಳಿಸಿದೆ. ಅದಕ್ಕೆ ಅವರು ಒಪ್ಪಿ ಕೆಲಸ ಮಾಡಲು ತಿಳಿಸಿದರು. ಆ ವಿಚಾರವನ್ನು ನಾನಿದ್ದ ಮನೆಯವರಿಗೆ, ನಿಮ್ಮ ಕೆಲಸಕ್ಕೆ ತೊಂದರೆಯಾಗದಂತೆ ಆ ಕೆಲಸವನ್ನು ಮಾಡುತ್ತೇನೆಂದು ಭರವಸೆ ಕೊಟ್ಟ ನಂತರ ಅವರು ಒಪ್ಪಿಕೊಡರು. ಆಗ ನನ್ನ ಮುಂದಿನ ವ್ಯಾಸಂಗದ ಖರ್ಚಿಗೆ ದಾರಿಯಾಯಿತು. ಶ್ರೀಮತಿ ಲೇಡಿ ಪಾರ್ವತಮ್ಮ ಪುಟ್ಟಣ್ಣ ಚೆಟ್ಟಿಯವರು, ಚಾಮರಾಜಪೇಟೆಯ 1ನೇ ಮುಖ್ಯ ರಸ್ತೆಯಲ್ಲಿ (ಆಲ್‍ಬರ್ಟ್ ವಿಕ್ಟರ್ ರಸ್ತೆ), "ಶಾರದ ಸ್ತ್ರೀ ಸಮಾಜ"ವೆಂಬ ಸಂಸ್ಥೆಯನ್ನು ಹೆಣ್ಣುಮಕ್ಕಳ ಅಭಿರುದ್ಧಿಗಾಗಿ ಕರಕುಶಲ ಕೈಗಾರಿಕೆ, ಚಾಪೆ ಹೆಣೆಯುವುದು, ಬಿದುರಿನ ಕುರ್ಚಿ, ಬುಟ್ಟಿ ಇತ್ಯಾದಿ ವಸ್ತು ತಯಾರಿಕೆಯಲ್ಲಿ, ಹೊಲಿಗೆ, ಕಸೂತಿ ಇತ್ಯಾದಿಗಳ ಜೊತೆಗೆ ಚಿಕ್ಕಮಕ್ಕಳಿಗೆ ಶಿಶುವಿಹಾರ ತರಗತಿಗಳನ್ನು ಪ್ರಾರಂಭ ಮಾಡಿ ನಡೆಸುತ್ತಿದ್ದರು. ಅದರ ಮುಖ್ಯಪಾಲಕರನ್ನಾಗಿ ಶ್ರೀ ಕೃಷ್ಣಮೂರ್ತಿ ಎಂಬುವರನ್ನು ನೇಮಿಸಿದ್ದರು. ನಾನು ಬಂಗಲೆಯಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ನನ್ನ 2ನೇ ವರ್ಷದ ಮತ್ತು ಮುಂದಿನ ವ್ಯಾಸಂಗಕ್ಕೆ ಲಕ್ಷ್ಮೀಕಟಾಕ್ಷ ದೊರಕಿದಂತಾಯಿತು.

ನಾನು ನಾನಿದ್ದ ಮನೆಯವರ ಕೆಲಸಕ್ಕಾಗಲಿ, ಅಥವಾ ಬಂಗಲೆಯ ಕೆಲಸಕ್ಕಾಗಲಿ ಚ್ಯುತಿಬಾರದಂತೆ ಕೆಲಸ ಮಾಡುತ್ತಿದ್ದೆ. ಹೀಗಿರುವಾಗ ದಿನಾಂಕ 26-02-1956 ರಲ್ಲಿ ಶ್ರೀಮತಿ ಪಾರ್ವತಮ್ಮನವರು ಹೃದಯಾಘಾತದಿಂದ ನಿಧನರಾದರು. ನಾನು ಆ ವರ್ಷವೇ ಎಸ್ ಎಸ್ ಎಲ್ ಸಿ ತರಗತಿಗೆ ಸೇರಬೇಕಾಗಿತ್ತು. ಶ್ರೀಮತಿ ಪಾರ್ವತಮ್ಮನವರ ನಿಧನ ಅವರ ಬಂಧುಗಳಿಗೆ ಒಂದು ತೆರನಾದ ದುಃಖ, ತೊಂದರೆ ನನಗೆ ನನ್ನ ಆರ್ಥಿಕ ಭವಿಷ್ಯಕ್ಕೆ ಪೆಟ್ಟುಬಿದ್ದಂತಾಯಿತು. ನಂತರ ಎಲ್ಲಾ ಕಾರ್ಯವೂ ಮುಗಿದ ನಂತರ, ಆಗಾಗ್ಗೆ ಅವರ ಹತ್ತಿರ ಬರುತ್ತಿದ್ದ ಶಾರದ ಸ್ತ್ರೀ ಸಮಾಜದ ವ್ಯವಸ್ಥಾಪಕರಾಗಿದ್ದ ಶ್ರೀ ಕೃಷ್ಣಮೂರ್ತಿಯವರನ್ನು ಭೇಟಿ ಮಾಡಿ ನನ್ನ ಹಣದ ಅವಶ್ಯಕತೆ ವಿವರಿಸಿದಾಗ, ಅವರು ಸಮಾಜದ ಕೆಲಸಕ್ಕೆ ಸಮಾಜದ ಸದಸ್ಯರುಗಳಿಂದ ಚಂದಾ ವಸೂಲಿ ಮಾಡಲು ಮತ್ತು ಆಗಾಗ್ಗೆ ನಡೆಯುವ ಸಮಾರಂಭದ ಪತ್ರ ವಿತರಿಸಲು ಒಬ್ಬರು ಕೆಲಸಗಾರರು ಬೇಕಾಗಿದ್ದಾರೆಂದು ತಿಳಿಸಿ, ನಂತರ ಒಂದು ದಿವಸ ನನ್ನನ್ನು ಆಗ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಸರೋಜಮ್ಮ ಶಾಂಭಶಿವಯ್ಯನವರಿಗೆ ಪರಿಚಯ ಮಾಡಿಸಿದರು. ನಾನು ಅವರಿಗೆ ಓದುತ್ತಿರುವ ವಿಚಾರ, ಹಣದ ಅವಶ್ಯಕತೆಯ ವಿಚಾರ ಎಲ್ಲವನ್ನು ತಿಳಿಸಿದಾಗ ಅವರು ಒಪ್ಪಿ ತಿಂಗಳಿಗೆ 15 ರೂಪಾಯಿ ಸಂಬಳದ ಮೇರೆಗೆ ನೇಮಕ ಮಾಡಿಕೊಂಡರು. ಇದು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಆಸರೆಯಾಯಿತು. ಆಗ ನನಗೆ ಸೈಕಲ್ ತುಳಿಯಲು ಬರುತ್ತಿರಲಿಲ್ಲ. ಆದರೆ ಸೈಕಲ್ ಸಮಾಜದ ಕೆಲಸಕ್ಕೆ ಬೇಕಾದ್ದರಿಂದ ಆಗಲೇ ನಾನು ಸೈಕಲ್ ತುಳಿಯಲು ಕಲಿತೆ. ಕಲಿತ ನಂತರ ಅವರೇ ಒಂದು ಹಳೆಯ ಸೈಕಲ್‍ನ್ನು 70 ರೂಪಾಯಿಗಳಿಗೆ ಕೊಡಿಸಿದರು. ನಂತರ ನಾನು, ಶಾಲೆಯ ಬಿಡುವಿನ ವೇಳೆ ನಾನಿದ್ದ ಮನೆಯವರ ಕೆಲಸ ಮತ್ತು ಸಮಾಜದ ಕೆಲಸ ಮಾಡಿಕೊಂಡು 1957 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದೆ. ನಂತರ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್‍ಗೆ ಸೇರಿ ವ್ಯಾಸಂಗವನ್ನು ಪೂರ್ತಿ ಮಾಡಿದೆ. ಇದಕ್ಕೆಲ್ಲಾ ನಾನು ಸೇರಿದಾಗ ಕಾರ್ಯದರ್ಶಿಯಾಗಿದ್ದು, ನಂತರ ಅಧ್ಯಕ್ಷರಾಗಿ ಮುಂದುವರೆದ ಶ್ರೀಮತಿ ಸರೋಜಮ್ಮ ಶಾಂಭಶಿವಯ್ಯನವರ ಸಹಕಾರ ಮರೆಯುವಂತಿಲ್ಲ. ರೂ.15 ರಿಂದ ನಾನು ಪಾಲಿಟೆಕ್ನಿಕ್ ಅಂತಿಮ ತರಗತಿಯ ವೇಳೆ 60 ರೂಪಾಯಿ ಕೊಡುತ್ತಿದ್ದರು. ಅಲ್ಲದೆ ನಾನು ಸೌತ್ ಇಂಡಿಯಾ ಮತ್ತು ನಾರ್ತ್ ಇಂಡಿಯಾ ಪ್ರವಾಸ ಮಾಡಲು ಬೇಕೆಂದಾಗ ಮುಂಗಡವನ್ನು ಕೊಟ್ಟು ನನ್ನ ಸಂಬಳದಲ್ಲಿ ಮುರಿದುಕೊಳ್ಳುತ್ತಿದ್ದರು.

ನಾನು ಡಿಪ್ಲೋಮಾ ಪಾಸಾದ ನಂತರ ಸರ್ಕಾರಿ ಕೆಲಸಕ್ಕೆ ಆದೇಶ ಬಂದ ಮೇಲೆ ಕೆಲಸ ಬಿಡಲೇ ಬೇಕಾದ ಸಂದರ್ಭ ಬಂದಾಗ ಒಳ್ಳೆಯ ಮನಸ್ಸಿನಿಂದ ಒಪ್ಪಿದರು. ನಂತರ ನಾನು ಸರ್ಕಾರಿ ಕೆಲಸ ಬೇಡವೆಂದು, ನಾನೇ ಸ್ವಂತ ಕಾಮಗಾರಿ ಹುದ್ದೆ ಪ್ರಾರಂಭ ಮಾಡುತ್ತೇನೆಂದು ನಿರ್ಧಾರ ಮಾಡಿ ಪ್ರಾರಂಭ ಮಾಡಿದ ನಂತರ, ನನ್ನ ಇತರೆ ಕಾಮಗಾರಿಗಳು ನಡೆಯುತ್ತಿರುವಾಗ, ಸಮಾಜದಲ್ಲಿ ಕಟ್ಟಲು ನಿರ್ಧರಿಸಿದ್ದ, ಬಯಲು ನಾಟಕ ರಂಗ ಮಂದಿರ ಮತ್ತು ಅದರ ಮೇಲೆ ಹೈಸ್ಕೂಲ್‍ಗಾಗಿ, ವೈಜ್ಞಾನಿಕ ಪ್ರಯೋಗ ಶಾಲೆ ಕಟ್ಟಡವನ್ನು ಕಟ್ಟಲು ಗುತ್ತಿಗೆ ಕೊಟ್ಟರು. ಈ ರೀತಿ ಜೀವನ ಮುಂದುವರೆದು ನನ್ನ ವೃತ್ತಿಯ ಅವಧಿಯಲ್ಲಿಯೇ, ನನ್ನ ಇತಿಮಿತಿಯಲ್ಲಿ ಅನೇಕ ಗುರುತರ ಸೇವೆಗಳನ್ನು ಮಾಡಿದ್ದೇನೆ. 1980 ರಿಂದಲೇ ಪತ್ರಕರ್ತನಾಗಿ, ಸಮಾಜ ಸೇವಕನಾಗಿ ಕೆಲಸ ಮಾಡುತ್ತಿದ್ದೆನೆ. ನನ್ನ ಸೇವೆಯನ್ನು ಪರಿಗಣಿಸದ ಸುಮಾರು 30 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ನನ್ನನ್ನು ಸನ್ಮಾನಿಸಿ ಪುರಸ್ಕರಿಸಿವೆ. ಇದರಲ್ಲಿ ಬಿಬಿಎಂಪಿಯವರಿಂದ 2011 ರಲ್ಲಿ ಕೊಡಮಾಡಿದ ಕೆಂಪೇಗೌಡ ಪ್ರಶಸ್ತಿಯೂ ಒಂದಾಗಿದೆ. ನನ್ನ ಜೀವನ ವೃತ್ತಾಂತ "ಬಾಳೊಂದು ನಾಟಕ" ಪುಸ್ತಕದಲ್ಲಿ ಎಲ್ಲವೂ ದಾಖಲಾಗಿವೆ. ನನ್ನ ಸಂಕ್ಷಿಪ್ತ ಸೇವಾ ಪರಿಚಯದ ದಾಖಲೆ ಕಿರುಹೊತ್ತಿಗೆಯಲ್ಲಿದೆ. ಈಗ ನನಗೆ 74 ವರ್ಷ ಪೂರೈಸಿದ್ದರೂ ಮುಂದೆ ನಾನು ಸಾಮಾಜಿಕ ಶಾಸ್ತ್ರದಲ್ಲಿ ಪಿಎಚ್‍ಡಿ ಮಾಡುವ ಉದ್ದೇಶದಿಂದ, ಈಗ ಮೊದಲನೆ ಬಿ.ಎ. ತರಗತಿಗೆ ಸೇರಿ ವ್ಯಾಸಂಗ ಮಾಡುತ್ತಿದ್ದೇನೆ.